ನಕ್ಷತ್ರಕ
ವಿಶ್ವಾಮಿತ್ರನ ಶಿಷ್ಯರಲ್ಲಿ ಒಬ್ಬ. ತನಗೆ ಹರಿಶ್ಚಂದ್ರನಿಂದ ಬರಬೇಕಾಗಿದ್ದ ದಕ್ಷಿಣಾ ದ್ರವ್ಯವನ್ನು ಪಡೆದು ತರಲು ವಿಶ್ವಾಮಿತ್ರನಿಂದ ಆಜ್ಞಪ್ತನಾಗಿ ಹರಿಶ್ಚಂದ್ರನ ಬೆನ್ನು ಹತ್ತಿದ. ಕೊಟ್ಟಮಾತಿನ ಪ್ರಕಾರ ಸಾಲವನ್ನು ತೀರಿಸಲು ಹರಿಶ್ಚಂದ್ರ ಸರ್ವಸ್ವವನ್ನೂ ಮಾರಬೇಕಾಯಿತು. ಆ ಸಂದರ್ಭದಲ್ಲಿ ಈತ ಆ ರಾಜದಂಪತಿಗಳಿಗೆ ಅನೇಕ ವಿಧವಾಗಿ ತೊಂದರೆಗಳನ್ನು ಕೊಟ್ಟ. ಕೊನೆಗೆ ಹರಿಶ್ಚಂದ್ರ ಕಾಶೀಪಟ್ಟಣವನ್ನು ಸೇರಿ, ತನ್ನನ್ನೂ ಮಡದಿ ಮಕ್ಕಳನ್ನೂ ಮಾರಿಕೊಂಡು ಕೊಡಬೇಕಾದ ಹಣವನ್ನು ಕೊಟ್ಟ ತರುವಾಯ ಈತ ವಿಶ್ವಾಮಿತ್ರನಲ್ಲಿಗೆ ಹೋದ. 

ಕೊಟ್ಟ ಸಾಲವನ್ನು ಪೀಡಿಸಿ ವಸೂಲು ಮಾಡುವವನನ್ನು ಇಂದಿಗೂ ನಕ್ಷತ್ರಕನೆನ್ನುತ್ತಾರೆ.	
	(ಬಿ.ಎನ್.ಎನ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ